ಕ್ರೋಬರ್, ಆಲ್‍ಫ್ರೆಡ್ ಲೂಯಿಸ್  	
1870-1960. ಅಮೆರಿಕದ ವಿಶ್ವವಿಖ್ಯಾತ ಮಾನವಶಾಸ್ತ್ರಜ್ಞರಲ್ಲೊಬ್ಬ. 1876ರಲ್ಲಿ ನ್ಯೂ ಜರ್ಸಿಯ ಹೊಬೊಕೆನ್ ಎಂಬಲ್ಲಿ ಜನಿಸಿದ. ಈತನ ತಂದೆತಾಯಿಗಳು ಜರ್ಮನ್ ಮೂಲದ ಪ್ರಾಟೆಸ್ಟಂಟರು. ಅವರು ಇಂಗ್ಲಿಷ್ ಭಾಷೆಯನ್ನು ಸಮರ್ಥವಾಗಿ ಮಾತನಾಡುತ್ತಿದ್ದರಾದರೂ ಮನೆಯ ಭಾಷೆ ಜರ್ಮನ್ ಆಗಿತ್ತು. ಕ್ರೋಬರನಿಗೆ ಬಾಲ್ಯದಲ್ಲಿಯೇ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಪರಿಚಯವಾಯಿತು. ಹುಡುಗನಾಗಿದ್ದಾಗಲೇ ಹೀಗೆ ನಾಲ್ಕು ಭಾಷೆಗಳ ಪರಿಚಯವಾದುದರಿಂದ ಭಾಷಾಶಾಸ್ತ್ರದಲ್ಲಿ ಇವನ ಆಸಕ್ತಿ ಕೆರಳಿತು. ಪ್ರಾಥಮಿಕ ವಿದ್ಯಾಭ್ಯಾಸ ಎಥಿಕಲ್ ಕಲ್ಚರ್ ಶಾಲೆಯಲ್ಲಿ ನಡೆಯಿತು. ಅಲ್ಲಿ ಪ್ರಾಚೀನ ಇತಿಹಾಸದ ಬಗ್ಗೆ ಕ್ರೋಬರನ ಆಸಕ್ತಿ ಕೆರಳಿತು. ಕೆಲ ಕಾಲದ ಅನಂತರ ಕ್ರೋಬರ್ ಮತ್ತು ಅವನ ಕೆಲವು ಮಿತ್ರರ ಗುಂಪೊಂದು ಸೈಂಟಿಫಿಕ್ ಸೊಸೈಟಿ ಎಂಬ ಸಂಘವೊಂದನ್ನು ಸ್ಥಾಪಿಸಿಕೊಂಡು ಪಳೆಯುಳಿಕೆಗಳು, ಖನಿಜಗಳು, ಮತ್ತು ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಮಾದರಿಗಳು-ಮುಂತಾದುವನ್ನು ಸಂಗ್ರಹಿಸಿ ಅವುಗಳ ಬಗ್ಗೆ ಪ್ರಬಂಧಗಳನ್ನು ತಯಾರಿಸಿ ಪರಸ್ಪರ ಓದಿ ಚರ್ಚಿಸುತ್ತಿದ್ದರು. ಹೀಗಾಗಿ ಕ್ರೋಬರ್ ಪ್ರಾಕೃತಿಕ ಚರಿತ್ರೆ ಮತ್ತು ಜೀವಶಾಸ್ತ್ರದ ಬಗ್ಗೆ ಹೆಚ್ಚು ಆಸಕ್ತಿಯನ್ನು ತಳೆದ.

	ಅನಂತರ ಕ್ರೋಬರ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ಎಂ.ಎ. ಡಿಗ್ರಿ ಪಡೆದು (1897) ಫ್ರಾನ್ಜ್ ಬೋಆಸನ ವಿದ್ಯಾರ್ಥಿಯಾಗಿ ಮಾನವ ಶಾಸ್ತ್ರ ಭಾಗವೊಂದರ ಅಧ್ಯಯನ ನಡೆಸಿ ಪಿಎಚ್‍ಡಿ. ಡಿಗ್ರಿಯನ್ನು ಪಡೆದ(1901). ಅದೇ ವರ್ಷ ಬಕ್ರ್ಲಿಯ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಭಾಗವೊಂದನ್ನು ತೆರೆದು ತನ್ನ ನಿವೃತ್ತಿಕಾಲದವರೆಗೂ ಅಲ್ಲಿದ್ದುಕೊಂಡು ಅದರ ಅಭಿವೃದ್ಧಿಗಾಗಿ ಕೆಲಸ ಮಾಡಿದ.

	ಕ್ರೋಬರ್ ಮಾನವಶಾಸ್ತ್ರವನ್ನು ತನ್ನ ಆಧ್ಯಯನ ಮಾರ್ಗವನ್ನಾಗಿ ಮಾಡಿಕೊಂಡುದಕ್ಕೆ ಮುಖ್ಯ ಕಾರಣ ಮಾನವನ ಸಂಸ್ಕøತಿ ಮತ್ತು ಬೆಳೆವಣಿಗೆಯ ಬಗ್ಗೆ ಅವನಿಗಿದ್ದ ಅಪಾರವಾದ ಆಸಕ್ತಿ. ಈತ ರಾಜಕೀಯ ಮತ್ತು ಸಾಮಾಜಿಕ ನೀತಿಗಳಲ್ಲಿ ಪ್ರಜಾಪ್ರಭುತ್ವವಾದಿಯಾಗಿದ್ದ. ಜನತೆಯ ಉದ್ಧಾರದ ಬಗ್ಗೆ ಇವನಿಗೆ ಅಪಾರವಾದ ಆಸಕ್ತಿ ಇತ್ತು. ಕ್ಯಾಲಿಫೋನಿರ್ಯಯಾದ ಇಂಡಿಯನ್ನರ ಭೂ ಆಕ್ರಮಣ ಚಳವಳಿಯಲ್ಲಿ ಈತ ಸಕ್ರಿಯ ಪಾತ್ರವಹಿಸಿದ. 1930ರಲ್ಲಿ ಮೊದಲಬಾರಿಗೆ ಬ್ಯೂರೋ ಆಫ್ ಇಂಡಿಯನ್ ಅಫೆರ್ಸ್ ಎಂಬ ಸಂಸ್ಥೆ ಜಾನ್ ಕಾಲಿಯರ್‍ನ ನೇತೃತ್ವದಲ್ಲಿ ಪ್ರಾರಂಭವಾದಾಗ ಅದರಲ್ಲಿ ಕ್ರೋಬರ್ ಮಾನವಶಾಸ್ತ್ರಜ್ಞನಾಗಿ ಕೆಲಸ ಮಾಡಿದನಲ್ಲದೆ ಸಂಸ್ಥೆ ಇಂಡಿಯನ್ನರ ಸಮಸ್ಯೆಗಳತ್ತ ಗಮನ ಹರಿಸಬೇಕೆಂಬ ಸೂಚಿಸಿ ಸಂಶೋಧಕರಿಗೆ ವ್ಯಾಸಂಗ ಮಾಡುವುದಕ್ಕೂ ಅದರ ಪ್ರಕಟಣೆಗೂ ಹೆಚ್ಚಿನ ಸ್ವತಂತ್ರ್ಯವಿರಬೇಕಾದ್ದು ಅಗತ್ಯವೆಂದು ತಿಳಿದು ಅದಕ್ಕಾಗಿ ಹೋರಾಡಿದ.

	ಕ್ರೋಬರ್ ಮಾನವಶಾಸ್ತ್ರದ ಎಲ್ಲ ವಿಭಾಗಗಳಿಗೂ ಗಮನಾರ್ಹವಾದ ಕೊಡುಗೆಯನ್ನು ಕೊಟ್ಟಿದ್ದಾನೆ ಎಂಬುದು ವಿದ್ವಾಂಸರ ಅಭಿಮತ. ಮಾನವಶಾಸ್ತ್ರದಲ್ಲಿ ಒಂದು ಹೊಸ ದೃಷ್ಟಿಯನ್ನು, ಒಂದು ನಿಯಮವನ್ನು ಹಾಕಿಕೊಟ್ಟ ಮಟ್ಟಿಗೆ ಈ ಮಾತು ಸತ್ಯ. ಪ್ರಥಮವಾಗಿ ತಾನೊಬ್ಬ ಜನಾಂಗಶಾಸ್ತ್ರಜ್ಞನೆಂದೂ ತನ್ನ ಮುಖ್ಯ ಉದ್ದೇಶ ಪ್ರಾಕೃತಿಕ ಸಂಸ್ಕøತಿ ಮತ್ತು ಅದರ ಬೆಳೆವಣಿಗೆಯನ್ನು ಹುಡುಕಿ ಕಂಡುಹಿಡಿದು ಅರ್ಥ ಮಾಡಿಕೊಳ್ಳುವುದು ಎಂದೂ ಪರಿಗಣಿಸಿದ್ದನಾದ ಕಾರಣ ಕ್ರೋಬರ್ ಜನಾಂಗಶಾಸ್ತ್ರದ ಹೊರಗೆ ಏನನ್ನೇ ಮಾಡಿದ್ದರೂ ಅದು ಪ್ರಾಸಂಗಿಕವಷ್ಟೆ. ಅಂಥ ಕಡೆಗಳಲ್ಲೂ ಈತ ತನ್ನ ಮೂಲ ಧೋರಣೆಯನ್ನೇ ಪ್ರದರ್ಶಿಸುತ್ತಾನೆ. ಈತ ಉಪಯೋಗಿಸಿಕೊಂಡ ವಿಧಾನಗಳು, ಸಮಸ್ಯೆಗಳ ವೈವಿಧ್ಯ, ವಿವರಣಾತ್ಮಕ ತತ್ತ್ವಗಳು- ಇವೆಲ್ಲ ಚಾರಿತ್ರಕಾಂಶಗಳಿಂದ ಕೂಡಿರುತ್ತಿದ್ದುವೆಂಬುದನ್ನು ಮರೆಯುವಂತಿಲ್ಲ.

	ಕ್ರೋಬರ್ ಮಾನವಶಾಸ್ತ್ರದಲ್ಲಿ ಪ್ರವೇಶ ಮಾಡುವ ಹೊತ್ತಿಗಾಗಲೆ ಪ್ರಕಟವಾದ ಕೃತಿಗಳು ಪ್ರಪಂಚದಾದ್ಯಂತ ಸಮಾಜದ ನಡೆವಳಿಕೆ ಮತ್ತು ಸಂಸ್ಕøತಿಯ ಪ್ರಾಮುಖ್ಯವನ್ನು ಕುರಿತು ವಿವರಿಸಿದ್ದುವು. ಅವುಗಳ ಪ್ರಕಾರ ಮಾನವಶಾಸ್ತ್ರಜ್ಞರು ಕಡೆಯ ಪಕ್ಷ ಸಂಸ್ಕøತಿಯ ಪ್ರಾಮುಖ್ಯವನ್ನಾದರೂ ಒಪ್ಪಿಕೊಳ್ಳಬೇಕಾಗಿತ್ತು. ಇಲ್ಲಿ ಜೀವಶಾಸ್ತ್ರ ಮತ್ತು ಪರಿಸರಶಾಸ್ತ್ರಗಳ ಮಹತ್ವ ಎಷ್ಟೆಂಬುದನ್ನು ಕ್ರೋಬರ್ ಒತ್ತಿ ಹೇಳಿದ.

	1923ರಲ್ಲಿ ಪ್ರಕಟವಾದ ಕ್ರೋಬರನ ಮಾನವಶಾಸ್ತ್ರವನ್ನು ಕುರಿತ ಪುಸ್ತಕ ಬಹಳ ಪ್ರಭಾವಶಾಲಿ ಕೃತಿ. ಮಾನವಶಾಸ್ತ್ರ ಮೊದಲಿಗೆ ಒಂದು ಕ್ರಮಬದ್ಧವಾದ ಅಧ್ಯಯನ ವಿಷಯವಾಗಿ ಒಪ್ಪಿಗೆ ಗಳಿಸಿದಾಗ, ಅನೇಕ ಮಂದಿ ಮಾನವಶಾಸ್ತ್ರಜ್ಞರು ಕಾಣಿಸಿಕೊಳ್ಳಲಾರಂಭಿಸಿದಾಗ, ಈ ಕೃತಿ ಎಲ್ಲರ ಕೈಪಿಡಿಯಂತೆ ಕಂಗೊಳಿಸಿತು. ಮಾನವಶಾಸ್ತ್ರದ ಬಗ್ಗೆ ಮತ್ತಿತರ ಮಾನವ ಸಂಸ್ಕøತಿಯ ಬಗ್ಗೆ ವಿದ್ವಾಂಸರಿಗೆ ಮತ್ತು ಜನಸಾಮಾನ್ಯರಿಗೆ ಈ ಕೃತಿ ಸಾಕಷ್ಟು ಹೊಸ ವಿಷಯಗಳನ್ನು ಒದಗಿಸಿತು. ಮೊದಲನೆಯ ಆವೃತ್ತಿಯಲ್ಲಿ ಮನುಷ್ಯನ ಸಾಂಪ್ರದಾಯಿಕ ನಡವಳಿಕೆಯ, ಜೀವಶಾಸ್ತ್ರೀಯ ಮತ್ತು ಪರಿಸರಣಗಳ ವಿವರಣೆಗಳಲ್ಲಿ ಸ್ವಲ್ಪ ಕೊರೆ ಕಂಡುಬಂದಿತಾದರೂ 1948ರಲ್ಲಿ ಪ್ರಕಟವಾದ ಎರಡನೆಯ ಆವೃತ್ತಿಯಲ್ಲಿ ಮಾನವಶಾಸ್ತ್ರದ ಮುಖ್ಯ ವಿಷಯಗಳಾದ ಜನಾಂಗ, ಭಾಷೆ ಸಂಸ್ಕøತಿ ಮನಶಾಸ್ತ್ರ. ಪ್ರಾಚೀನ ಚರಿತ್ರೆ-ಇವುಗಳಿಗೆಲ್ಲ ಯುಕ್ತಸ್ಥಾನ ದೊರೆತದ್ದರಿಂದ ಗ್ರಂಥ ಹೆಚ್ಚು ಪರಿಪೂರ್ಣವಾಯಿತು.

	ಭೌತಿಕ ಮಾನವಶಾಸ್ತ್ರಕ್ಕೆ ಕ್ರೋಬರನ ಕೊಡುಗೆ ಹೆಚ್ಚಿನದು. ಈತ ಆ ಕಾಲು ಶತಮಾನದಲ್ಲಿ ಜನಾಂಗಗಳ ಬಗ್ಗೆ ಬಂದಿದ್ದ ಪುಸ್ತಕಗಳನ್ನೆಲ್ಲ ವಿಮರ್ಶಿಸಿ ಅವುಗಳಲ್ಲಿರುವ ಲೋಪದೋಷಗಳನ್ನು ಕುರಿತು ಬರೆದ. 1920ರಲ್ಲಿ ಮಾನವಜನಾಂಗ ಮತ್ತು ಅದರ ಪ್ರಾಚೀನತೆ ಎಂಬ ಬಗ್ಗೆ ಮೂರು ಪ್ರಬಂಧಗಳನ್ನು ಪ್ರಕಟಿಸಿದ. ಈ ವಿಷಯವನ್ನೇ ಅನಂತರ ಸಾಕಷ್ಟು ವಿಸ್ತರಿಸಿ ತನ್ನ ಮಾನವಶಾಸ್ತ್ರ ಕೃತಿಯನ್ನು ಪುನರ್ರಚಿಸಿದ. ಈತನಿಗೆ ಆಧುನಿಕ ವಂಶಶಾಸ್ತ್ರದ ಮಾಹಿತಿ ಇರಲಿಲ್ಲವಾದರೂ ಮಾನವನ ಪಳೆಯುಳಿಕೆ ಮತ್ತು ಜನಾಂಗ ಮೂಲಗಳನ್ನು ಕುರಿತು ವಿಕಾಸವಾದದ ಆಧಾರದ ಮೇಲೆ ಅನೇಕ ಅಂಶಗಳನ್ನೀತ ವಿವರಿಸಿದ. 1928ರಲ್ಲಿ ಮಾನವ ಸಂಸ್ಕøತಿಯ ಒಳಪದರಗಳ ವಿವರಣೆಯನ್ನು ಗುರುತಿಸಿದ. 1934ರಲ್ಲಿ ರಕ್ತಸಂಬಂಧ ವಿಭಜನೆಯತ್ತ ಗಮನ ಸೆಳೆದ. ಭೌತಿಕ ಮಾನವಶಾಸ್ತ್ರಕ್ಕೆ ವಿಕಾಸವಾದದ ಒರೆ ಹಚ್ಚಿದ್ದು, ಹೊಸ ವಿಷಯಗಳನ್ನು ಮಂಡಿಸಿದ್ದು, ಸಂಶೋಧನೆಯ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿದದ್ದು ಕ್ರೋಬರನ ಮುಖ್ಯ ಕೊಡುಗೆಗಳು.

	ಭಾಷಾಶಾಸ್ತ್ರಕ್ಕೆ ಕ್ರೋಬರನ ಕೊಡುಗೆ ಅಷ್ಟೇ ಹೆಚ್ಚಿನದು ಮತ್ತು ಬಹಳ ಕಾಲ ನಿಲ್ಲುವಂಥದು. ಆಸ್ಟ್ರೇಲಿಯದ ಭಾಷೆಗಳ ಪರಸ್ಪರ ಸಂಬಂಧದ ಬಗ್ಗೆಯೂ ಈತ ಬರೆದಿದ್ದಾನೆ. ಮಧ್ಯ ಅಮೆರಿಕದ ಅನೇಕರ ಆಸಕ್ತಿಯೆಲ್ಲ ಭಾಷೆಗಳ ಚಾರಿತ್ರಿಕ ಅಂಶಗಳ ಬಗ್ಗೆ ಮಾತ್ರ ಇತ್ತು. ಆದರೆ ಕ್ರೋಬರ್ ಭಾಷೆಗಳ ಪರಸ್ಪರ ತೋಲನ ಮಾಡಿ ಕ್ಯಾಲಿಫೋರ್ನಿಯದ ಇಂಡಿಯನ್ ಭಾಷೆಗಳಲ್ಲಿ ಅನೇಕ ಪ್ರಭೇದಗಳನ್ನು ಗುಂಪುಗಳನ್ನು ಗುರುತಿಸಿದ್ದಾನೆ. ಅಲ್ಲದೆ ಅಮೆರಿಕದ ಮೂಲ ನಿವಾಸಿಗಳಾದ ಇಂಡಿಯನ್ನರ ಉಪಭಾಷಾಪರಿವೀಕ್ಷಣೆಗೂ ಮಾರ್ಗದರ್ಶಕನಾಗಿದ್ದಾನೆ.

	ಕ್ರೋಬರ್ ಮೂಲತಃ ಸಮಾಜಶಾಸ್ತ್ರಜ್ಞ. ಇವನ ಸಂಶೋಧನೆಯ ಪ್ರಥಮ ಗುರಿ ಮಾನವಶಾಸ್ತ್ರ. ಆದರೆ ಈತ ತನ್ನ ಸಂಶೋಧನೆಯ ಹಾದಿಯಲ್ಲಿ ಪ್ರಾಚೀನ ವಸ್ತು ಸಂಶೋಧನೆಯನ್ನೂ ನಡೆಸಿದ್ದಾನೆ. ಇವನ ಪ್ರಾಚ್ಯ ಸಂಶೋಧನೆಯ ಮೊದಲ ಕೃತಿ ನೇಟೀವ್ ಕಲ್ಚರ್ ಆಫ್ ದಿ ಸೌತ್ ವೆಸ್ಟ್(1928). ಇದಕ್ಕಿಂತ ಮುಂಚೆಯೇ ಈ ದಿಸೆಯಲ್ಲಿ ಪ್ರಕಟವಾದ ಎರಡು ಕೃತಿಗಳಿಗಿಂತ ಕ್ರೋಬರನದು ಉತ್ತಮವೆಂದು ವಿದ್ವಾಂಸರ ಮತ. ಈತನ ಪ್ರಾಚ್ಯ ಸಂಶೋಧನೆ ಮೆಕ್ಸಿಕೋ ಮತ್ತು ಪೆರುಗಳಿಗೆ ಹೆಚ್ಚು ಸೀಮಿತವಾಗಿತ್ತೆಂದು ಹೇಳಬಹುದು. ಪ್ರಾಚ್ಯ ಸಂಶೋಧನೆಯಲ್ಲಿ ಖಚಿತ ತಂತ್ರಗಳನ್ನು ಜಾರಿಗೆ ತರುವಲ್ಲಿ ಕ್ರೋಬರನ ಪಾತ್ರವೂ ಪ್ರಮುಖವಾದುದು.

	ಕ್ರೋಬರ್ ತನ್ನ ಸಂಶೋಧನೆಯ ತೆಕ್ಕೆಯಲ್ಲಿ ಸೇರಿಸಿಕೊಂಡ ಮತ್ತು ಪ್ರಮುಖವೆಂದು ಪರಿಗಣಿಸಿದ ಮತ್ತೊಂದು ಅಂಗ ಮಾನವಕುಲಗಳ ವಿವರಣೆ. ಕ್ಷೇತ್ರ ಕಾರ್ಯದಲ್ಲಿ ಈತ ಹಾಕಿಕೊಟ್ಟ ಮಾರ್ಗ ಅನುಕರಣೀಯವಾದುದು. ಈ ದಿಸೆಯಲ್ಲಿ ಈತನ ಟಿಪ್ಪಣಿಗಳು ಅಪಾರ ಬೆಲೆ ಬಾಳತಕ್ಕವೆಂದು ವಿದ್ವಾಂಸತ ಮತ. ಕ್ರೋಬರ್ ತನ್ನ ವಿದ್ಯಾರ್ಥಿಗಳಿಗೆ ಎಲ್ಲವನ್ನು ಹೇಳುವ ಬದಲು ಅವರೇ ನೋಡಿ ಮಾಡಿ ಕಲಿಯುವಂತೆ ಮಾರ್ಗದರ್ಶನ ಮಾಡುತ್ತಿದ್ದನಂತೆ. ಪ್ರಾಚ್ಯ ಸಂಶೋಧನಾಶಾಸ್ತ್ರಕ್ಕೆ ಕ್ರೋಬರನ ಮುಖ್ಯ ಕೊಡುಗೆಯಾದ ದಿ ಹ್ಯಾಂಡ್ ಬುಕ್ ಆಫ್ ದಿ ಇಂಡಿಯನ್ಸ್ ಆಫ್ ಕ್ಯಾಲಿಫೋರ್ನಿಯ ಎಂಬುದು 1925ರಲ್ಲಿ ಪ್ರಕಟವಾಯಿತು. ಹೀಗೆ ಕ್ರೋಬರ್ ತನ್ನ ಸಂಶೋಧನ ಮಾರ್ಗದಲ್ಲಿ ದೊರೆಯಬಹುದಾದ ಅನೇಕ ವಿಷಯಗಳಲ್ಲಿ ಸಮರ್ಥವಾಗಿಯೇ ಕೈಯಾಡಿಸಿದ್ದಾನೆಂದು ಹೇಳಬಹುದು. ಈತ ಪ್ರತಿಪಾದಿಸುವ ವಿಷಯಗಳನ್ನೆಲ್ಲ ಒಪ್ಪಲಾಗದಿದ್ದರೂ ಅವನ್ನು ಕಡೆಗಣಿಸುವುದಂತೂ ಖಂಡಿತ ಸಾಧ್ಯವಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ.

	ತಾನು 1960ರಲ್ಲಿ ಏರ್ಪಡಿಸಿದ್ದ ಮಾನವಶಾಸ್ತ್ರದ ದಿಗಂತಗಳು ಎಂಬ ವಿದ್ವದ್‍ಗೋಷ್ಠಿಯಿಂದ ಹಿಂತಿರುಗುವಾಗ ಪ್ಯಾರಿಸ್ ನಗರದಲ್ಲಿ ಕ್ರೋಬರ್ ತೀರಿಕೊಂಡ.

	ಕ್ರೋಬರ್ ಅಮೆರಿಕದ ಮಾನವಶಾಸ್ತ್ರ ಸಂಘದ ಸಂಸ್ಥಾಪಕರಲ್ಲೊಬ್ಬ. 1907ರಲ್ಲಿ ಅದರ ಅಧ್ಯಕ್ಷನೂ ಆಗಿ ಕೆಲಸ ಮಾಡಿದ್ದಾನೆ. ಅದಕ್ಕೆ ಮುಂಚೆ 1906ರಲ್ಲಿ ಅಮೆರಿಕ ಜಾನಪದ ಸಂಘದ ಅಧ್ಯಕ್ಷನೂ ಆಗಿದ್ದನಲ್ಲದೆ ಮುಂದೆ 1940ರಲ್ಲಿ ಅಮೆರಿಕ ಭಾಷಾಶಾಸ್ತ್ರ ಸಂಘದ ಅಧ್ಯಕ್ಷನೂ ಆಗಿ ಸೇವೆ ಸಲ್ಲಿಸಿದ. ಕ್ರೋಬರನಿಗೆ ಅನೇಕ ಬಹುಮಾನಗಳು ಬಂದಿವೆ. 1945ರಲ್ಲಿ ರಾಯಲ್ ಆಂತ್ರೊಪಾಲಜಿಕಲ್ ಇನ್‍ಸ್ಟಿಟ್ಯೂಟಿನ ಹಕ್ಸ್‍ಲೆ ಮೆಮೊರಿಯಲ್ ಪದಕವೂ 1946ರಲ್ಲಿ ಮಾನವಶಾಸ್ತ್ರ ಸಂಶೋಧನೆಗೆ ವೆನ್ನರ್ ಗ್ರೆನ್ ಸಂಸ್ಥೆಯ ವೈಕಿಂಗ್ ಪದಕವೂ ಈತನಿಗೆ ಬಂದುವು. ಅಮೆರಿಕದ ಕ್ಯಾಲಿಫೋರ್ನಿಯ, ಚಿಕಾಗೊ, ಕೊಲಂಬಿಯ, ಹಾರ್ವರ್ಡ್ ಯೇಲ್ ಮುಂತಾದ ವಿಶ್ವವಿದ್ಯಾಲಯಗಳು ಈತನಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ಕೊಟ್ಟು ಗೌರವಿಸಿವೆ.

	ಕ್ರೋಬರ್ ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾನೆ. ಫಿಲಿಪೈನ್ಸಿನ ಜನರು(1919) ಮಾನವಶಾಸ್ತ್ರ(1923), ಕ್ಯಾಲಿಫೋರ್ನಿಯದ ಇಂಡಿಯನ್ನರ ಕೈಪಿಡಿ (1925) ಮೂಲ ಉತ್ತರ ಅಮೆರಿಕದ ಸಾಂಸ್ಕøತಿಕ ಮತ್ತು ಪ್ರಾಕೃತಿಕ ಪ್ರದೇಶಗಳು(1939), ಸ್ವಿಮ್ಯುಲಸ್ ಡಿಫ್ಯೂಷನ್(1940), ಹೆಂಗಸರ ಉಡುಪಿನ ವೈವಿಧ್ಯದ ಮೂರು ಶತಮಾನಗಳು(1940), ಪೆರೂವಿಯನ್ ಆರ್ಕಿಯಾಲಜಿ ಇನ್ 1942(1944), ಕಾನ್‍ಫಿಗರೇಷನ್ಸ್ ಆಫ್ ಕಲ್ಚರ್ ಗ್ರೋತ್(1944), ಮೊಹಾವೆಯ ಒಂದು ಚಾರಿತ್ರಿಕ ಮಹಾಕಾವ್ಯ(1951), ಸಂಸ್ಕøತಿ, ಒಂದು ವಿಮರ್ಶಾತ್ಮಕ ವಿವೇಚನೆ (1952), ಸಂಸ್ಕøತಿಯ ಸ್ವಭಾವ(1952), ರೀತಿ ಮತ್ತು ನಾಗರಿಕತೆಗಳು(1957), ಸ್ಟಾರ್ಕ್‍ಮನ್ನನ ಲೂಸೆನೋ ವ್ಯಾಕರಣ (1960)-ಇವು ಕ್ರೋಬರನ ಅತ್ಯುತ್ತಮ ಗ್ರಂಥಗಳಲ್ಲಿ ಕೆಲವು. 							(ಎಚ್.ಕೆ.ಆರ್.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ